ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಆಲಕನೂರು ಗ್ರಾಮದ ಕರಿಸಿದ್ದೇಶ್ವರ ದೇವಸ್ಥಾನದ ಧ್ರುವ ಹೆಸರಿನ ಆನೆ ಅನಾರೋಗ್ಯದಿಂದ ಮೃತಪಟ್ಟಿದ್ದು, ಅರಣ್ಯ ಇಲಾಖೆಯ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ನೆರವೇರಿತು.
CHIKKODI: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಆಲಕನೂರು ಗ್ರಾಮದ ಪ್ರಸಿದ್ಧ
ಕರಿಸಿದ್ದೇಶ್ವರ ದೇವಸ್ಥಾನದ ಪ್ರೀತಿಯ ಸಾಕು ಆನೆ
'ಧ್ರುವ' ತೀವ್ರ ಅನಾರೋಗ್ಯದಿಂದ ತಡರಾತ್ರಿ ಮೃತಪಟ್ಟಿದೆ. ಸುದೀರ್ಘ ಕಾಲದಿಂದ ಮಠದ ಧಾರ್ಮಿಕ ಉತ್ಸವಗಳು ಹಾಗೂ ಜಾತ್ರಾ ಮಹೋತ್ಸವಗಳಲ್ಲಿ ಪ್ರಮುಖ ಆಕರ್ಷಣೆಯಾಗಿದ್ದ ಈ ಆನೆಯ ಅಗಲಿಕೆಯಿಂದ ಇಡೀ ಗ್ರಾಮದಲ್ಲಿ ಶೋಕಸಾಗರ ಆವರಿಸಿದೆ.
ಕಳೆದ ಕೆಲವು ದಿನಗಳಿಂದ
ಅನಾರೋಗ್ಯದಿಂದ ಬಳಲುತ್ತಿದ್ದ ಧ್ರುವನಿಗೆ ಪಶುವೈದ್ಯರ ತಂಡ ನಿರಂತರ ಚಿಕಿತ್ಸೆ ನೀಡುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ ಕೊನೆಯುಸಿರೆಳೆದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಕರಿಸಿದ್ದೇಶ್ವರ ಮಠದ ಭಕ್ತಾದಿಗಳು ಹಾಗೂ ಸ್ಥಳೀಯ ಗ್ರಾಮಸ್ಥರು ಆಗಮಿಸಿ ಆನೆಯ ದರ್ಶನ ಪಡೆದು ಕಣ್ಣೀರಿಟ್ಟರು.
ಅರಣ್ಯ ಇಲಾಖೆ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ:
ಘಟನೆ ವರದಿಯಾಗುತ್ತಿದ್ದಂತೆಯೇ
ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಪಶುವೈದ್ಯಾಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿತು. ಇಲಾಖೆಯ ನಿಯಮಾವಳಿಗಳ ಪ್ರಕಾರ ಅಧಿಕಾರಿಗಳ ಸಮ್ಮುಖದಲ್ಲೇ ಆನೆಯ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಯಿತು.
ಪಂಚಭೂತಗಳಲ್ಲಿ ಲೀನವಾದ ಧ್ರುವ:
ಮರಣೋತ್ತರ ಪರೀಕ್ಷೆಯ ಬಳಿಕ ಕರಿಸಿದ್ದೇಶ್ವರ ಮಠದ ಪೂಜ್ಯರು ಹಾಗೂ ಧರ್ಮದರ್ಶಿಗಳ ಸಮ್ಮುಖದಲ್ಲಿ ಆನೆ ಧ್ರುವನಿಗೆ ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಬಳಿಕ ಮಠದ ಸುಪರ್ದಿಯ ಜಾಗದಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರ ನೆರವೇರಿಸುವ ಮೂಲಕ ಆನೆಯನ್ನು ಪಂಚಭೂತಗಳಲ್ಲಿ ವಿಲೀನಗೊಳಿಸಲಾಯಿತು.